top of page
Search

ಹೊಯ್ಸಳ ಕಾಲದ ಅಮೂಲ್ಯ ನಿಧಿ, ಕೇಶವೇಶ್ವರ ದೇವಾಲಯ - ಭಾಗ-1

  • Mar 13
  • 2 min read

T V Nataraj Pandith

ಹೊಯ್ಸಳ ಕಾಲದ ಅಮೂಲ್ಯ ನಿಧಿ, ಕೇಶವೇಶ್ವರ ದೇವಾಲಯ - ಭಾಗ-1

8 Jan 2024

Location: Karnataka / Hassan / Channarayapatna / A Belaguli

Categories: Built Heritage


ಹೆಸರೇ ಹೇಳುವಂತೆ ಬೆಳಗುಲಿಯೆಂಬುದು ಒಂದು ಕಾಲಕ್ಕೆ ಅಗ್ರಹಾರವಾಗಿ ಅಭಿವೃದ್ಧಿ ಹೊಂದಿದ ಸ್ಥಳ. ಎರಡನೇ ಹೊಯ್ಸಳ ಬಲ್ಲಾಳನ ಕಾಲದಲ್ಲಿ, ಎಂದರೆ ಶಾಲಿವಾಹನ ಶಕೆ 1210ರಲ್ಲಿ, ಆತನ ದಂಡನಾಯಕ ಕೇಶವ ಅಥವಾ ಕೇಶಿರಾಜನು ಇದನ್ನು ಸ್ಥಾಪಿಸಿ ಅಲ್ಲಿ ಕೇಶವೇಶ್ವರ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯವು ಇಂದು ಬೆಟ್ಟೇಶ್ವರವೆಂದು ಪ್ರಸಿದ್ಧವಾಗಿದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಲಕ್ಷ್ಮೀಸಮುದ್ರ ಮತ್ತು ಕೇಶವಸಮುದ್ರ ಎಂಬ ಹೆಸರಿನ ಎರಡು ದೊಡ್ಡ ಕೆರೆಗಳನ್ನು ನಿರ್ಮಿಸಲಾಗಿದೆ.

ಈ ದೇವಾಲಯದ ಮುಖ್ಯ ವಿಶೇಷತೆಯೆಂದರೆ ಒಂದೇ ದೇವಾಲಯದಲ್ಲಿ ಸುಂದರವಾದ ಶಿವ ಮತ್ತು ವಿಷ್ಣುವಿನ (ಕೇಶವ) ಗರ್ಭಗುಡಿಗಳನ್ನು ಹೊಂದಿರುವುದು ಶೈವ ಮತ್ತು ವೈಷ್ಣವ ಸಮನ್ವಯದ ಸಂಕೇತವಾಗಿದೆ.

ಇದೊಂದು ದ್ವಿಕೂಟ ದೇವಾಲಯವಾಗಿದ್ದು ಕೇಶವನ ಗರ್ಭಗುಡಿಯು ದಕ್ಷಿಣಾಭಿಮುಖವಾಗಿದೆ ಹಾಗೂ ಶಿವನ ದೇವಾಲಯವು ಪೂರ್ವಾಭಿಮುಖವಾಗಿದೆ. ಇವೆರಡನ್ನೂ ಸೇರಿಸಿದಂತಿರುವ ಮಂಟಪವು ವಿಶಾಲವಾಗಿದ್ದು ಅನೇಕ ತಿರುಗಣಿ ಕಂಬಗಳನ್ನು ಹೊಂದಿದೆ. ಅವು ಒಂದನ್ನೊಂದು ಹೋಲುವಂತಿಲ್ಲದಿರುವುದು ವಿಶೇಷ.

ಸಾಧಾರಣವಾಗಿ ಹೊಯ್ಸಳ ದೇವಾಲಯಗಳು ಜಗುಲಿಯ ಮೇಲೆ ನಿರ್ಮಾಣವಾಗಿರುತ್ತದೆ. ಆದರೆ ಈ ದೇವಾಲಯದ ತಳಪಾಯವು ನೇರವಾಗಿ ನೆಲದಿಂದಲೇ ಆರಂಭವಾಗಿದೆ. ನವರಂಗಕ್ಕೆ ಎರಡು ಪ್ರವೇಶದ್ವಾರಗಳಿವೆ. ಪಶ್ಚಿಮದ ಗರ್ಭಗೃಹವು ಚೌಕಾಕೃತಿಯದಾಗಿದೆ. ಬೆಟ್ಟೇಶ್ವರ ದ್ವಾರದಲ್ಲಿರುವ ದ್ವಾರಪಾಲಕರನ್ನು ಹೆಚ್ಚಾಗಿ ಅಲಂಕರಿಸಲಾಗಿಲ್ಲ. ಚತುರ್ಬಾಹುಗಳ ಕೇಶವನ ವಿಗ್ರಹವು ಆರೂವರೆ ಅಡಿ ಎತ್ತರವಾಗಿದ್ದು, ಸುಸ್ಥಿತಿಯಲ್ಲಿದೆ.

ದೇವಾಲಯದ ಕಂಬಗಳ ಕೆತ್ತನೆ ಮತ್ತು ಗಮನ ಸೆಳೆಯುತ್ತದೆ. ನವರಂಗದ ಮೇಲ್ಭಾಗದಲ್ಲಿನ ಅಷ್ಟದಿಕ್ಪಾಲಕರ ಕೆತ್ತನೆ ಅಂದಿನ ಕಾಲದ ಶಿಲ್ಪಿಗಳ ಕಲಾ ನೈಪುಣ್ಯತೆ ಬೆರಗುಂಟುಮಾಡುತ್ತದೆ.

ದೇವಾಲಯದ ಒಳ ಭಾಗದಲ್ಲಿ ಸರಸ್ವತಿ, ಬೃಹತ್ ಗಣೇಶ, ಸಪ್ತ ಮಾತೃಕೆಯರು, ಷಣ್ಮುಖ, ಕಾಳಿಯ ವಿಗ್ರಹಗಳ ಕತ್ತನೆ ಗಮನ ಸೆಳೆಯುವಂತಿದೆ ಹಾಗೂ ಸುಸ್ಥಿತಿಯಲ್ಲಿರುವುದು ಸಂತಸದ ಸಂಗತಿ. ಅಲ್ಲದೆ ಸರಸ್ವತಿಯ ಕೈಯಲ್ಲಿನ ಜಪ ಮಾಲೆ ಕೆತ್ತನೆ ಅದ್ಭುತವಾಗಿದೆ. ಕಾಳಿ ವಿಗ್ರಹವು ಆ ಕಾಲದಲ್ಲಿ ಈ ಭಾಗದಲ್ಲಿ ಶಕ್ತಿಯ ಆರಾಧನೆ ಅಸ್ತಿತ್ವದಲ್ಲಿದ್ದುದನ್ನು ಸ್ಪಷ್ಟೀಕರಿಸುತ್ತದೆ.

ದೇವಾಲಯದ ಮುಂದಿನ ವಿಶಾಲವಾದ ಜಗಲಿಯ ಕಟ್ಟೆಗಳು - ಅಂದಿನ ದಿನಗಳಲ್ಲಿ ದೇವಾಲಯದಲ್ಲಿ ವೈಭವಯುತವಾಗಿ ನಡೆಯುತ್ತಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೀಕ್ಷಿಸಲು ಬರುವವರಿಗೆ ನಿರ್ಮಿಸಿರುವ ಆಸನ ವ್ಯವಸ್ಥೆಯು ಆಗಿರಬಹುದಾಗಿದೆ ಎಂದು ಊಹಿಸಬಹುದಾಗಿದೆ.

ದೇವಾಲಯದ ಮುಂದಿರುವ ವಿಶಾಲವಾದ ಕೆರೆ ‘ಕೇಶವ ಸಮುದ್ರ‘ಎಂದೇ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈಶ್ವರನ ಮುಂಭಾಗದ ಬಾಗಿಲಿಗೆ ಹೊಂದಿಕೊಂಡಂತಿರುವ ಮಂಟಪ-ಅದಕ್ಕೆ ಹೊಂದಿಕೊಂಡಂತಿರುವ ಪುಟ್ಟ ಗುಡಿಯಲ್ಲಿನ ನಂದಿಯ (ಬಸವಣ್ಣನ) ವಿಗ್ರಹ ಭಕ್ತಾಧಿಗಳ/ಪ್ರವಾಸಿಗರ ಗಮನ ಸೆಳೆಯುತ್ತದೆ.

ಮುಖಮಂಟಪದಲ್ಲಿರುವ ಶಾಸನ ಕೂಡ ಸುಂದರವಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ ಸರಳ ರೇಖಾಕೃತಿಯ ಸ್ತಂಭಗಳನ್ನು ತೋರಿಸಲಾಗಿದೆ. ಗಾರೆಯಿಂದ ರಚಿಸಲಾದ ಶಿಖರಗಳು ಇನ್ನೂ ಉಳಿದುಕೊಂಡಿವೆ. ಕೀರ್ತಿಮುಖಗಳ ಅಲಂಕಾರಗಳಿಲ್ಲದ ಮಾಡಿನ ಸುತ್ತ ಇರುವ ರಚನೆ ಸರಳ ಫಲಕಗಳನ್ನು ಅಳವಡಿಸಿದಂತಿದೆ.

ಕಾಲನ ಆಘಾತಕ್ಕೆ ಸಿಕ್ಕಿದ್ದರೂ, ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಈ ದೇವಾಲಯದ ಬಗ್ಗೆ ತಳೆದಿರುವ ಪ್ರೀತಿಯಿಂದಾಗಿ ಆಗೀಗ ಸ್ವಚ್ಛಗೊಳ್ಳುತ್ತಿರುವುದರಿಂದ ಈ ಸ್ಥಿತಿಯಲ್ಲಿರಲು ಸಾಧ್ಯವಾಗಿದೆ.

ಇದರ ಪುನರುಜ್ಜೀವನವನ್ನು ಕೈಗೊಳ್ಳುವ ಕಾಲವೂ ಸಮೀಪಿಸಿರುವುದರಿಂದ, ಭಾರತೀಯ ಪ್ರಾಚ್ಯವಸ್ತುಗಳ ಇಲಾಖೆ, ರಾಜ್ಯದ ಪುರಾತತ್ತ್ವ ಇಲಾಖೆಗಳು ಇತ್ತ ಗಮನಹರಿಸಿ, ಆದಷ್ಟು ಬೇಗ ದುರಸ್ತಿ, ಪುನರ್ ನಿರ್ಮಾಣದ ಕಾರ್ಯಗಳನ್ನು ಕೈಗೊಳ್ಳುವಂತಾಗಲಿ ಎನ್ನುವದು ಕಲಾಪ್ರೇಮಿಗಳ ಆಶಯ.

ಮುಂದಿನ ಭಾಗ-2:

https://cykul.in/SCoGa/swagraam/activityShare2.php?AM=mivPosts&AI=326


 
 
 

Comments

Rated 0 out of 5 stars.
No ratings yet

Add a rating
Copyright @ 2023 by SWAGRAAM FOUNDATION
+91 83106 52068
  • Instagram
  • YouTube
  • Facebook
  • LinkedIn
bottom of page