ನಮ್ಮೂರ ಕೆರೆ ಕಥೆ
- Mar 13
- 1 min read
Dr.Thippeswamy K T
ನಮ್ಮೂರ ಕೆರೆ ಕಥೆ
8 Jan 2024
Location: Karnataka / Tumkur / Sira / Kallambella
Categories: Natural Heritage
ಒಂದು ಊರಲ್ಲಿ ಒಂದು ಕೆರೆ ಐತೆ ಅಂದ್ರೇನೆ ಅದೊಂತರ ಸಮೃದ್ಧಿ. ಕೆರೆ ತುಂಬಿದ್ರಂತೂ ರೈತಾಪಿಗಳಿಗೆ ಆನಂದವೂ ಆನಂದ. ಸೋಮಾರನೇ ಕೋಡಿ ಬೀಳುತ್ತೆ ಅನ್ನೋ ನಂಬಿಕೆ ನಮ್ಮೂರಲ್ಲಿತ್ತು. ನಾವು ಮಳೆ ಬಂದ ಬೆಳಗ್ಗೆ ಬೆಳಿಗ್ಗೆನೆ ಕೆರೆ ಏರಿಮೇಲೆ ಹಾಜುರ್. ಕೋಡಿ ಬೀಳೋದು ನೋಡೊಕೆ ಸುತ್ತಮುತ್ತ ಊರೋರೆಲ್ಲಾ ಬರ್ತಾ ಇದ್ರು. ಬೆಳಗ್ಗಿನ ಜಾವಕ್ಕೆ ಮರ್ರೋ ಅಂತಾ ಸದ್ದು. ಆಗ್ಲೆ ಕೊಡಿ ಬಿದ್ದಿರೋ ಸೂಚನೆ ಸಿಗೋದು. ನಮ್ಮೂರ ಕೆರೆಗೆ ನಾಲ್ಕು ಕೋಡಿ ಇದಾವೆ. ಅದೃಷ್ಟ ವಶಾತ್ ಕೊನೆ ಕೋಡಿ ಹಿಂದೆನೆ ನಮ್ಮನೆ. ಕೋಡಿ ಬಿದ್ರೆ ಬೇಗ ಗೊತ್ತಾಗುತ್ತೆ.
ನಮ್ಮ ಕೆರೆ ಸುಮಾರು 700 ಎಕ್ರೆಗಿಂತ ದೊಡ್ದದು. ನಮ್ಮ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಇದೂಂದು. ಈಗ ಅಲ್ಲಲ್ಲೇ ಒತ್ಲಿಸಿಕಂಡಿದ್ದಾರೆ ಅನ್ನಿ. ಅಯ್ಯೋ ಎಷ್ಟೋ ಕೆರೆನೇ ನುಂಕೊಂಡಿರುವಾಗ ಒತ್ಲಿಸಿಕೊಂಡಿರೋದೇನು ಮಹಾ ಬಿಡಿ.
ನಮ್ಮೂರ ಬಗ್ಗೆ ಪುರಾತನ ಕಾಲದಿಂದ್ಲು ಆಗ್ರಾ ಅನ್ನೊ ನಂಬಿಕೆ ಇದೆ. ಹಾಗಾಗಿ ನಮ್ಮೂರಿಗೆ ಹೆಣ್ಣುಕೊಡೋಕೆ ನಾಮುಂದು ತಾಮುಂದು ಅಂತಿದ್ದ ಕಾಲ ಒಂದಿತ್ತು ಅನ್ನಿ. ಕೆರೆಗೂ ಹೆಣ್ಣಿಗೂ ಏನು ಸಂಬಂಧ ಅಂತೀರಾ ಯೋಚನೆ ಮಾಡಿ ನೀವೆನಾ. ಇದು ನಮ್ಮ ಕೆರೆ ಮಹಾತ್ಮೆ. ಹೆಚ್ಚೂಕಮ್ಮಿ ಒಂದುವರೆ ಸಾವಿರ ಹೆಕ್ರೆ ನೀರಾವರಿಗೆ ನಮ್ಮೂರ ಕೆರೆನೇ ಆಧಾರ. ಕಣ್ಣುಮನ ಕಾಣೋವರ್ಗು ಅಡಿಕೆ ತೋಟ, ಬತ್ತದ ಗದ್ದೆ. 2005ರ ವರೆಗೂ ನಮ್ಮೂರ ದಾರೆಗೆ ಬಿದ್ದ ಭತ್ತ ಗುಡಿಸೋಕೆ ಆಂದ್ರ ಭಾಗದಿಂದ ಜನ ಬರೋರು, ಅಷ್ಟು ಸಮೃದ್ಧಿ ಇತ್ತು. ಈಗ ನಮ್ಮೂರೆಲ್ಲಾ ರೇಶನ್ ಕಾರ್ಡ್ ಮಾಡಿಸಿಕೊಂಡು ಸೊಸೈಟಿ ಬಾಗ್ಲಲ್ಲಿ ನಿಂತೌವ್ರೆ ಬಿಡಿ.
ನಮ್ಮೂರ ಕೆರೆಗೆ ಹೇಮಾವತಿ ನೀರೇನೋ ಬಂತು. ಸಿರಾಕೆ ಕುಡಿಯೋ ನೀರು ಅಂತೇಳಿ ಗದ್ದೆಬೈಲಿಗೆ ನೀರಿಲ್ಲಂದಗಾಯ್ತು. ಅಲ್ಲಿಗೆ ಭತ್ತ ಬೆಳೆಯೋ ಕಥೆ ಮುಗಿತು. ಈಗ ಕೆರೆಗೆ ನೀರಿದ್ರೂ ಬೆಳೆಗೆ ನೀರಿಲ್ಲ. ಮೊದ್ಲು ಎರಡೊರ್ಷಕ್ಕಾದ್ರೂ ಒಂದು ಸಾರಿ ಕೆರೆ ತುಂಬೊದು. ಆ ವರ್ಷ ಗದ್ದೆಗೈದ್ರೆ ಎರಡ್ಮೂರೊರ್ಷ ತಿನ್ನೊವಷ್ಟು ಭತ್ತ ಆಗೋದು, ಜೀವಾದಿಗೆ ನೆಲ್ಲುಲ್ಲಾಗೊದು. ಈಗಿದೆಲ್ಲ ಗತವೈಭವ ಅಷ್ಟೇ. ಏನೋ ಹೇಮಾವತಿ ಬಂದು ಹಳ್ಳದಲ್ಲಿ ನೀರು ಹರಿತಿರೋದ್ರಿಂದ ಸುತ್ತಮುತ್ತ ಬೋರ್ ಶೇಪಾಗುತ್ತೆ ಅನ್ನೊದೊಂದೆ ಒಳ್ಳೆ ಸುದ್ದಿ. ಏನಾನಾ ಕಳ್ಳಂಬೆಳ್ಳ ಕೆರೆ ನೀರ್ನಾ ಸಿರಾಕೆ ಪೈಪ್ ಲೈನ್ ಮೂಲ್ಕ ತಂಗೊಂಡೋದ್ರೆ ಅಲ್ಲಿಗೆ ಕಳ್ಳಂಬೆಳ್ಳದ ಅಡಿಕೆ ತೋಟಗಳ ಕಥೆ ಏನೊ ಗೊತ್ತಿಲ್ಲ.
ಯಾವಯಾವೂ ನೀರಾವರಿ ಯೋಜನೆ ಮಾಡ್ತಾವ್ರೆ. ಯಂಗಾರಾ ಮಾಡಿ ನಮ್ಮ ತಾಲ್ಲೂಕಿನ ಎಲ್ಲಾ ಕೆರೆಗೆ ನೀರುಬಂದು ಕುಡಿಯೋಕು ಕೃಷಿಗೂ ನಿರಾಗ್ಲಿ ಅನ್ನೋದು ನನ್ನ ಬಯಕೆ.
ರಾತ್ರಿ ಚೆನ್ನಾಗಿ ಮಳೆ ಆತು. ಬೆಳಗ್ಗೆ ಕೆರೆ ನೋಡೋಕೆ ಹೋದೆ. ಇದೆಲ್ಲಾ ಜ್ಞಾಪಕ್ಕೆ ಬಂತು.
#ಜೀವನಪ್ರೀತಿಯಬರಹಗಳು



Comments