top of page
Search

ನನ್ನೂರು ಕೂಡಲಕುಪ್ಪೆ

  • Mar 13
  • 2 min read

ARJUN K S

ನನ್ನೂರು ಕೂಡಲಕುಪ್ಪೆ

8 Jan 2024

Location: Karnataka / Mandya / Srirangapatna / Kudalukuppe

Categories: Natural Heritage,Vocation Skills


ನನ್ನ ಕುತೂಹಲ ಏನು ಅಂದರೆ, ಐತಿಹಾಸಿಕ ಪುರಾಣಪ್ರಸಿದ್ಧ ಶ್ರೀರಂಗಪಟ್ಟಣದಿಂದ 5 ಕಿ. ಮೀ ದೂರದಲ್ಲಿರುವ, ತನ್ನದೇ ಆದ ವಿಶೇಷ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿರುವ ನಮ್ಮ ಗ್ರಾಮಕ್ಕೆ ಕೂಡಲಕುಪ್ಪೆ ಎಂಬ ಹೆಸರು ಹೇಗೆ ಬಂತು ಅಂತಾ?

ಈ ವಿಷಯದ ಬಗ್ಗೇ ಐತಿಹಾಸಿಕ ದಾಖಲೆ ಲಭ್ಯವಿಲ್ಲದಿದ್ದರೂ ಹಿರಿಯರ ಅನುಭವದ ಮಾತಿನಂತೆ ಹೀಗೆ ಭಾವಿಸಬಹುದು. ಈ ಗ್ರಾಮದ ಶಾಂತಿ ಸುವ್ಯವಸ್ಥೆ ಹಾಗೂ ನ್ಯಾಯ ಪಂಚಾಯಿತಿಯ ವ್ಯವಸ್ಥೆ ಎಷ್ಟು ಚೆನ್ನಾಗಿತ್ತೆಂದರೆ, ಯಾವುದೇ ಜಾತಿಯ, ಯಾವುದೇ ಧರ್ಮದ, ಯಾವುದೇ ಸಮುದಾಯದ ನಿರಾಶ್ರಿತಕರು ಆಗಮಿಸಿ, ಮೂಲನಿವಾಸಿಗಳ ಜೊತೆ ಕೂಡಲಸಂಗಮದಂತೆ ಬೆರೆತು ಇಲ್ಲೇ ಶಾಶ್ವತವಾಗಿ ಭಾತೃತ್ವ ಭಾವನೆಯೊಂದಿಗೆ ಸರ್ವಜನಾಂಗದ ಶಾಂತಿಯ ತೋಟದಂತೆ ಬದುಕನ್ನು ಕಟ್ಟಿಕೊಳ್ಳುತಿದ್ದರು. ಆದ್ದರಿಂದ ಕೂಡಲಕುಪ್ಪೆ ಎಂಬ ಹೆಸರು ಬಂದಿರಬಹುದು.

ರಾಜ ಮನೆತನವಾದ ಗಂಗರು, ಹೊಯ್ಸಳರು ಇಲ್ಲಿ ಆಳ್ವಿಕೆ ಮಾಡಿರುವ ನಿದರ್ಶನಗಳಿದ್ದು, ಗ್ರಾಮದ ಮಧ್ಯಭಾಗದಲ್ಲಿ ವಿಜಯ ಸಂಕೇತವಾದ ವೀರಗಲ್ಲು ಲಭ್ಯವಿದ್ದು, ಗ್ರಾಮದ ಧೈರ್ಯವಂತಿಕೆ ಹಾಗೂ ಹೋರಾಟದ ಕಿಚ್ಚನ್ನು ಬಿಂಬಿಸುತ್ತದೆ. ಪೂರ್ವ ಕಾಲದಲ್ಲಿ ಕುಂಬಾರರು ಮಡಿಕೆ ಮಾಡಲು ನಮ್ಮ ಗ್ರಾಮಕ್ಕೆ ಬಂದು ವಾಸವಿದ್ದು ಮಡಿಕೆಗಳು ಒಡೆದು ಹೋಗುವುದಿಲ್ಲ ಎಂದು ಗ್ರಾಮದಿಂದ ಹೊರಟುಹೋದರು ಎಂಬ ಪ್ರತೀತಿ ಇದೆ.

ಕೃಷಿ ಪ್ರಧಾನವಾದಂತ ನನ್ನ ಗ್ರಾಮದಲ್ಲಿ ಯೋಗ್ಯವಾದ ಭೂಮಿ ಹೊಂದಿದ್ದು, ಗ್ರಾಮದ ಆರಂಭದ ದಾರಿಯುವುದಕ್ಕೂ ಕೆರೆಗಳನ್ನು ಹೊಂದಿರುವ ಕುರುಹುಗಳು ಇವೆ. ಗ್ರಾಮಕ್ಕೆ ಪ್ರಮುಖ ನೀರಿನ ಮೂಲವಾದ ಚಿಕ್ಕದೇವರಾಯ ನಾಲೆ, ಲೋಕಪಾವನಿ ನದಿ ಮತ್ತು ಅಡ್ಡ ಹಳ್ಳ ಗ್ರಾಮದ ಪಕ್ಕದಲ್ಲಿ ಹರಿಯುವುದರಿಂದ, ಕಬ್ಬು ಮತ್ತು ಭತ್ತ ಪ್ರಮುಖ ಬೆಳೆಯಾಗಿದೆ.

ಕೂಡಲಕುಪ್ಪೆ 1200 ಮತದಾರರನ್ನು ಹೊಂದಿರುವ ಪುಟ್ಟ ಗ್ರಾಮವಾದರೂ, ಗರಿಷ್ಠ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವಿಧರರು ಹಾಗೂ ವೃತ್ತಿ ಶಿಕ್ಷಣ ಪಡೆದವರರು ಇದ್ದು ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದೆ. ಇದು ಮೂರು ಜನ ನ್ಯಾಯಾಧೀಶರು ಹೊಂದಿರುವ ತಾಲೂಕಿನ ಏಕೈಕ ಗ್ರಾಮ.

ನಮ್ಮ ಊರಿನವರು ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಇಲಾಖೆಯಲ್ಲಿ, ಭ್ರಷ್ಟಾಚಾರ ನಿಯಂತ್ರಿಸುವ ಲೋಕಾಯುಕ್ತ ಇಲಾಖೆಯಲ್ಲಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಗ್ರಾಮದ ಹೆಮ್ಮೆಯ ಸಂಗತಿ. ಇತ್ತೀಚೆಗೆ ವೈದ್ಯಕೀಯ ವೃತ್ತಿಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಗ್ರಾಮದ ಹಿರಿಮೆ. ಅಷ್ಟೆ ಅಲ್ಲದೆ ಕಾವೇರಿ ಹೋರಾಟಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

ಕೂಡಲಕುಪ್ಪೆಯು ಪ್ರತಿಷ್ಠಿತ ಕಬಡ್ಡಿ ಕ್ರೀಡೆಗೆ ಪ್ರಸಿದ್ಧಿಯಾಗಿದ್ದು, ಬಾಲಕ ಮತ್ತು ಬಾಲಕಿಯರು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ. ಗ್ರಾಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರ ಸಂಖ್ಯೆ ಹೆಚ್ಚಾಗಿದ್ದು ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಪಡೆದ ಕ್ರೀಡಾಪಟುಗಳನ್ನು ಒಳಗೊಂಡಿದೆ. ಭಾರ ಎತ್ತುವ ಸ್ಪರ್ಧೆಯಲ್ಲಿ ರಾಷ್ಟ್ರದ ಕಂಚಿನ ಪದಕ ವಿಜೇತರು ಹಾಗೂ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರುವ ಆಟಗಾರರು ನಮ್ಮ ಗ್ರಾಮದವರಾಗಿದ್ದಾರೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಕ್ರೀಡಾ ರತ್ನ ಪ್ರಶಸ್ತಿ ನಮ್ಮ ಗ್ರಾಮಕ್ಕೆ ಲಭಿಸಿದೆ.


 
 
 

Comments

Rated 0 out of 5 stars.
No ratings yet

Add a rating
Copyright @ 2023 by SWAGRAAM FOUNDATION
+91 83106 52068
  • Instagram
  • YouTube
  • Facebook
  • LinkedIn
bottom of page