Student life, ಧಾರವಾಡ, ಕೊಡೆಪುರಾಣ
- Mar 13
- 2 min read
Dr.Thippeswamy K T
Student life, ಧಾರವಾಡ, ಕೊಡೆಪುರಾಣ
3 Apr 2024
Location: Karnataka / Dharwad / Dharwad / Dharwad
Categories: Others
ಒಂದು ಮಾತಿದೆ Student life is Golden life ಅಂತ. ಅದು ಸ್ಟೂಡೆಂಟ್ ಆಗಿದ್ದಾಗ ಗೊತ್ತೇ ಆಗಲ್ಲ. ಅದು ಮುಗ್ದು ನಿಜ ಜೀವನಕ್ಕೆ ಕಾಲಿಟ್ಟಮೇಲೆ ಆ ಲೈಫ್ ಎಂಗೆ, ಏನು ಅಂತ ಅನುಭವಕ್ಕೆ ಬರುತ್ತೆ. ಆದ್ರೆ ಅವಾಗ ಕಾಲ ಮುಂದೆ ಹೋಗಿರುತ್ತೆ.
ಅಂಗಂತ ಜೀವನ ಪೂರ್ತಿ ಸ್ಕೂಲುಕಾಲೇಜಲ್ಲೇ ಇರೋಕು ಆಗಲ್ಲ ಅಲ್ವೇ?. ಆಸಕ್ತಿ ಇದ್ರೆ ಕಲಿಕೆ ಮತ್ತೆ ಜೀವನ ಎರಡು ಜೊತೆಜೊತೆ ಸಾಗೋತರ ಎನನ ವ್ಯವಸ್ಥೆ ಮಾಡ್ಕೋಬೋದು.
ನಾನು ನನ್ನ ಸ್ಟೂಡೆಂಟ್ ಲೈಫ್ ಮುಗಿಸಿಕೊಂಡು ಒಂದು ದಶಕವೇ ಕಳೆದೋತು. ಬೆಂಗಳೂರಿನ "ಭಾರತೀಯ ಮನೋವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ"ಯಲ್ಲಿ 'ಆಪ್ತಸಮಾಲೋಚನಾ ಮನೋವಿಜ್ಞಾನ'ದಲ್ಲಿ ಸ್ನಾತಕೋತ್ತರ ಪದವಿ ಓದ್ದೆ. ಆಮೇಲೆ ಕೆಲಸಗಿಲಸ ಅಂದುಕೊಂಡು ಬದುಕಿನ ಬಂಡಿ ಸಾಗ್ತು. ಹಿಂಗೆ ಒಂದಷ್ಟು ವರ್ಷ ಆದ ಮೇಲೆ ಧಾರವಾಡದ ಕರ್ನಾಟಕ ವಿವಿನಲ್ಲಿ ಪಿಹೆಚ್‌ಡಿ ಗೆ ಸೇರಿದೆ. ಸೇರಿದ ಮೊದಲಿಗೆ ಕೋರ್ಸ್ ವರ್ಕ್ ಮಾಡಬೇಕು. ಅದರ ಭಾಗವಾಗಿ ಕ್ಲಾಸ್ ರೋಮಿನಲ್ಲಿ ಕೂತು ಪಾಠ ಕೇಳ್ವಾಗ ಆಗ್ತಿದ್ದ ಖುಷಿನೇ ಬೇರೆ. ಆಗ ನನ್ನ ಮಾಸ್ಟರ್ ಡಿಗ್ರಿ ಲೈಫ್ ನೆನಪಾಗ್ತಿತ್ತು.
ಈಗ ಪಿಹೆಚ್‌ಡಿ ಮಾಡುವಾಗ ಮತ್ತೊಮ್ಮೆ ಸ್ಟೂಡೆಂಟ್ ಲೈಫ್ ಸಿಕ್ಕಿದ್ದು ಅದರ ಅನುಭವನ ಸಕ್ಕತ್ ಎಂಜಾಯ್ ಮಾಡ್ದೆ. ಅದರಲ್ಲೂ ಕೆಯುಡಿಯ (ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ) ಸೈಕಾಲಜಿ ಪ್ರೋಫೆಸರ್ ಗಳು ನಿಜವಾಗ್ಲೂ ಸೂಪರ್. ಹತ್ತು ವರ್ಷಗಳ ಹಿಂದೆ ಕೇಳಿದ ಸೈಕಾಲಜಿ ಸಿದ್ದಾಂತಗಳೆಲ್ಲ ಮತ್ತೆ ಮತ್ತೆ ನೆನಪಾದವು. ನಿಮಗೆ ಒಂದು ಮಾತು ಹೇಳ್ಬೇಕು, ನಾನು ಸೈಕಾಲಜಿ ಕೋರ್ಸ್ ಓದಿದ್ದು ನನ್ನ ಬದುಕಿನ ಅತಿದೊಡ್ಡ ಪುಣ್ಯ ಅಂತ ಭಾವಿಸಿದ್ದಿನಿ. ಕಾರಣ ನನ್ನ ಅದು ಪ್ರತಿದಿನ ಕೈ ಹಿಡಿದು ನಡೆಸುತ್ತೆ. ಅದರಲ್ಲೂ ನನ್ನ ಮಾಸ್ಟರ್ ಡಿಗ್ರಿನಲ್ಲಿ ವಿಶ್ವ ವಿಖ್ಯಾತ ಮನೋವಿಜ್ಞಾನಿಗಳು ಪಾಠ ಮಾಡಿದ್ದು ನಮಗೆ, ಅದು ಇನ್ನೂ ಹೆಮ್ಮೆ.
ಏನೆ ಆಗ್ಲಿ ನಾನು ಸೈಕಾಲಜಿ ಸ್ಟೂಡೆಂಟ್ ಅಂತ ಹೇಳೋಕೆ ಪ್ರೌಢ್ ಆಗುತ್ತೆ. ಇಂದು ಕೆಯುಡಿ ಬೇಟಿಮಾಡಿ ನಮ್ಮ ಡಿಪಾರ್ಟ್ಮೆಂಟ್ ಗೆ ಹೋಗಿ ನನ್ನ ಪಿಹೆಚ್‌ಡಿ ಕೆಲಸ ಮಾಡುವಾಗ ನನ್ನ ಸಹ ಸಂಶೋಧನಾರ್ತಿಗಳ ಜೊತೆಗೆ ಈ ಬಗ್ಗೆ ಮಾತಾಡಿದೆ. ಇರೋದನ್ನು ಕಳೆದುಕೊಂಡಾಗ್ಲೇ ಅಲ್ವೇ ಅದರ ಬೆಲೆ ತಿಳಿಯೋದು. ಇರ್ಲಿ ಬಿಡಿ ಸೈಕಾಲಜಿ ಕಥೆ ಸಾಕು.
ಧಾರವಾಡ ಮತ್ತು ಧಾರವಾಡ ವಿವಿ ಯರಡೂ ಚೆಂದ. ವಿಶಾಲ ಕಾಡು, ಅದರ ನಡುವೆ ಹಲವಾರು ವಿಭಾಗಗಳು, ಅಲ್ಲಲ್ಲೇ ಓದ್ತಾ ಕುಳಿತಿರೋ ಹುಡುಗ ಹುಡುಗಿರು, ಎಲ್ಲಿ ನೋಡುದ್ರೂ ಹಸುರು, ಸಿಟಿಗೆ ಬಂದ್ರೆ ಕಲ್ಚರಲ್ ವಾತಾವರಣ, ವಾವ್ ಸೂಪರ್. ಕಳೆದ ಭಾರಿ ಬಂದಾಗ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಬೇಟಿ ನೀಡಿ ಪಾಪುರವರನ್ನು ಮಾತಾಡಿಸಿಕೊಂಡು ಬಂದಿದ್ದ ನೆನಪು. ಬೇಂದ್ರೆಯವರ ಸಾಧನಕೇರಿಗೂ ಹೋಗ್ಬರ್ಬೇಕು ಅನ್ನೋ ಪ್ಲಾನಿದೆ. (ಬೇಂದ್ರೆ ಅಜ್ಜ ಕರೆಯುತ್ತಿದ್ದಾರೆ, ಬಾರೋ ಸಾಧನಕೇರಿಗೆ ಅಂತ) ಧಾರವಾಡದಲ್ಲಿ ನೋಡಬೇಕಿರೋ ಜಾಗ ಇದ್ರೆ ಹೇಳಿ. ನೋಡೋಣ.
ಈಗಂತೂ ಧಾರವಾಡದಲ್ಲಿ ಮಳೆ ಯಾವಾಗ ಬರುತ್ತೋ ಯಾವಾಗ ಬಿಡುತ್ತೋ ಗೊತ್ತೇ ಆಗಲ್ಲ. ಕೊಡೆ ಇದ್ದೇ ಇರಬೇಕು. ನಾನೋ ಸಿರಾದ ಬಯಲು ಸೀಮೆ ಮನುಷ್ಯ, ನಾವು ಕೊಡೆ ಬಳಸೋದು ಬಲು ಅಪರೂಪ. ಇಲ್ಲೋ ಕೊಡೆ ಇಲ್ದಿದ್ರೆ ಹೊರಗೆ ಕಾಲಿಡಂಗಿಲ್ಲ. ಕಾಲೇಜ್ ಹುಡ್ಗಹುಡ್ಡಿರಿಂದ ಹಿಡಿದು ವಾಕ್ ಮಾಡೋಕೆ ಬರೋ ಅಜ್ಜ ಅಜ್ಜೀರ ಕೈಯಲ್ಲೆಲ್ಲಾ ಬಗೆಬಗೆಯ, ಬಣ್ಣಬಣ್ಣದ, ತರಾವರಿ ಕೊಡೆಗಳೆ. (ಡಿಗ್ರಿಯಲ್ಲಿ "ಕೊಡೆಯ ವಿಚಾರ" ಲಲಿತ ಪ್ರಬಂದ ಓದಿದ ನೆನಪು, ನೀವು ಇದನ್ನು ಓದಿದ್ರೆ ಯಾರು ಬರೆದಿದ್ದು ಅಂತಾ ಹೇಳ್ತೀರಾ?). ಇಲ್ಲಿನ ಮಳೇನೋ ಎರಡು ನಿಮ್ಷ ಬಂದ್ರೆ ಯರಡು ನಿಮ್ಷ ನಿಲ್ಲುತ್ತೆ, ಜಿಟಿ ಜಿಟಿ ಅಂತ. ಕೆಲವೊಮ್ಮೆ ಬಿಟ್ಟುಬಿಡದೆ ದೋ ಅಂತ ಸುರಿಯುತ್ತೆ, ಕೆಲವೊಮ್ಮೆ ಚಿಮುಕಿಸುತ್ತೆ. ಒಟ್ನಾಗೇ ಎಲ್ಲೆಲ್ಲೂ ನೀರೇ ನೀರು. ಅದಕ್ಕೆ ಈ ಮಳೆ ಬಗ್ಗೆ ಬೆಳಗ್ಗೆ ತಿಂಡಿತಿನ್ನೋಕೋದಾಗ ಹೊಟೆಲ್ ನಾಗೆ ಒಬ್ಬರನ್ನ ಕೇಳಿದೆ, ಅದಕ್ಕೆ ಅವರು 'ಹಿಂಗೇರಿ ಇಲ್ಲಿ' ಅಂತೇಳಿ ಒಂದು ಗಾದೆ ಹೇಳುದ್ರು "ಧಾರವಾಡದ ಮಳೆ ನಂಬಂಗಿಲ್ಲ, ಬೆಳಗಾಂ ಹುಡುಗಿ ನಂಬಗಿಲ್ಲ" ಅಂತ. ಎಲ್ಲಿಯ ಮಳೆ ಎಲ್ಲಿಯ ಹುಡ್ಗಿ? ಏನು ಕಥೆಯೋ ಅಂತೂ ದೋಸೆ ತಿಂದು ಚುಮುಚುಮು ಮಳೆಲಿ ನೆಂದು ಬಂದೆ. ಮುಂದಿನ ಸಾರಿ ಬರುವಾಗ ಮರೀದೆ ಒಂದೊಳ್ಳೆ ಕೊಡೆ ತರ್ಬೇಕಪ್ಪ.
#ಜೀವನಪ್ರೀತಿಯಬರಹಗಳು



Comments