top of page
Search

ಮನೆ-ಮನ ಯಕ್ಷಗಾನ (ಚಿಕ್ಕಮೇಳ)

  • Kavitha
  • Sep 8, 2023
  • 1 min read

ಪರಶುರಾಮ ಸೃಷ್ಟಿಯ ಭವ್ಯ ಇತಿಹಾಸ ಹೊಂದಿರುವ ಕರಾವಳಿ ಭಾಗದಲ್ಲಿ ಆಟಿಕಳಂಜ, ಚೆನ್ನು ಕುಣಿತ, ಸೋಣೆ ಜೋಗಿ, ಗೌಡರ ಸಿದ್ದವೇಷ, ಮದಿಮಾಯೆ, ಮದಿಮಾಳ್, ಕನ್ಯಾಪು ಮೊದಲಾದ ಪರಂಪರೆಗಳು ನಿಧಾನವಾಗಿ ಮಾಸಿ ಹೋಗುತ್ತಾ ಇವೆ. ಅಳಿಯುತ್ತಿರುವ ಪರಂಪರೆಗಳ ಈ ಕಾಲಘಟ್ಟದಲ್ಲಿ ಕಣ್ಣೆದುರಿಗೆ ಗೋಚರಿಸಿದ್ದು ಗಂಡು ಕಲೆಯಾದ ಯಕ್ಷಗಾನ. ಅದೆಷ್ಟೋ ಇತಿಹಾಸವಿರುವ ಯಕ್ಷಗಾನವನ್ನು ಮನೆ-ಮನಗಳಿಗೆ ತಲುಪಿಸುವ ಚಿಂತನೆಯ ಫಲವೇ ಮನೆ-ಮನ ಯಕ್ಷಗಾನ ಅಥವಾ ಚಿಕ್ಕಮೇಳ.

ಹಿಂದಿನ ಕಾಲದಲ್ಲಿ ಆಟಿಯ ಮಾಸದಲ್ಲಿ ಮನೆಗಳಲ್ಲಿರುವ ದೋಷ ಪರಿಹಾರವಾಗುತ್ತದೆ ಎಂದು 6 ಅಥವಾ 7 ಜನರ ಚಿಕ್ಕಮೇಳವನ್ನು ಕರೆಸಿ ಆಡಿಸುತ್ತಿದ್ದರು. ಯಕ್ಷಗಾನ ಗೆಜ್ಜೆ ಸೇವೆಯ ಸಂದರ್ಭದಲ್ಲಿ ಹೊರ ಹೊಮ್ಮುವ ನಾದ ತರಂಗದಿಂದ ಮನೆ-ಮನದ ದೋಷ ಪರಿಹಾರವಾಗುತ್ತದೆಂಬ ನಂಬಿಕೆ ನಮ್ಮ ಹಿರಿಯರದಾಗಿತ್ತು. ಧರ್ಮ ಪ್ರಚಾರ ಮತ್ತು ಪ್ರಸಾರಕ್ಕೆ ಯಕ್ಷಗಾನದ ಮೂಲ ಬಿಂದುವಾಗಿದೆ.


ree

ಹಳೆಯ ಕಾಲದಲ್ಲಿ ಯಕ್ಷಗಾನ ವೇಷಗಳು ಮನೆಯಂಗಳದಲ್ಲಿ ಕುಣಿಯುತ್ತಿದ್ದರು.ಆದರೆ ಈಗ ಮನೆಯೊಳಗೆ ಚಾವಡಿಯಲ್ಲಿ ಕುಣಿಯುವ ಸಂಪ್ರದಾಯ ಇದೆ. ಚಿಕ್ಕಮೇಳದ ತಂಡದಲ್ಲಿ ಇಬ್ಬರು ಪಾತ್ರಧಾರಿಗಳು, ಚಂಡೆ, ತಾಳ, ಭಾಗವತರು ಇರುತ್ತಾರೆ. ತಂಡವು ಮನೆಗೆ ಬರುವ ದಿನ ಮೊದಲೇ ದಿನಾಂಕವನ್ನು ತಿಳಿಸಿರುತ್ತಾರೆ. ಜನನ / ಮರಣ ಸೂತಕವಿದ್ದರೆ ದಿನಾಂಕವನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ. ಚಿಕ್ಕಮೇಳ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 10 /11 ರವರೆಗೂ ಇರುತ್ತದೆ. ತಂಡ ದೇವರನ್ನು / ದೇವಿಯನ್ನು ಕರೆತರುವ ಮೊದಲು, ಶ್ರೀ ಗಣಪತಿ ದೇವರಿಗೆ ಸ್ವಸ್ತಿಕವಿರಿಸಿ, 2ಬಾಳೆಲೆಯಲ್ಲಿ 6 ಕುಡ್ತೆ (1 ಸೇರು) ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಕೆ, ನಾಣ್ಯ ಇತ್ಯಾದಿ ಇಟ್ಟು ದೀಪವನ್ನು ಉರಿಸಿಡಬೇಕು. ದೀಪದ ಹತ್ತಿರ ಹಲಸಿನ ಮಣೆಗೆ ಬಟ್ಟೆ ಹಾಸಿರಬೇಕು. ಅದರಲ್ಲಿ ದೇವಿಯನ್ನು ಇಟ್ಟು, ಹೂವಿನಿಂದ ಅಲಂಕರಿಸಿ, ಆರತಿ ಬೆಳಗುತ್ತಾರೆ.


ಪೌರಾಣಿಕ ಕಥೆಯ ಯಾವುದಾದರೂ ಒಂದು ಸಣ್ಣ ಭಾಗದ 2 ಹಾಡುಗಳನ್ನು ಮೊದಲು ಭಾಗವತರು ಹಾಡುತ್ತಾರೆ.

ree

ಆನಂತರ ಪಾತ್ರಧಾರಿಗಳು ಅದೇ ವಿಷಯವನ್ನು ಮಾತುಗಾರಿಕೆ, ನೃತ್ಯಗಳ ಮೂಲಕ ಪ್ರದರ್ಶಿಸುತ್ತಾರೆ. ನಂತರ ಆರತಿ ಬೆಳಗಿ, ಎತ್ತಿ ಮನೆಯವರಿಗೂ ನೀಡುತ್ತಾರೆ. ಮನೆಯವರು ಮುಂಚಿತವಾಗಿ ತಿಳಿಸಿದಲ್ಲಿ ಶ್ರೀ ದೇವರ ಎದುರು ವಿಶೇಷವಾದ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ರೀತಿ ಮನೆಯವರು ದೇವರು ಬಂದಾಗ ಪ್ರೀತಿಯಿಂದ ಸ್ವಾಗತಿಸಿ, ಸೇವೆ ಮಾಡಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ.


ಮನೆಮಂದಿಯಲ್ಲಾ ಸಂತೋಷದಿಂದ ಆಸ್ವಾದಿಸುವುದರ ಜೊತೆಗೆ ಯಕ್ಷಗಾನ ಕಲೆಯೇ ಮನೆ ಮನೆಗೆ ತೆರಳುವುದರಿಂದ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಯಲು ಮತ್ತು ಕಲೆ ಇನ್ನಷ್ಟು ಪ್ರಚಾರ ಪಡೆಯಲು ಪ್ರೇರಕವಾಗುತ್ತಿದೆ ಈ ಚಿಕ್ಕಮೇಳ.

1 Comment


Sudarshan Ganapathi
Sudarshan Ganapathi
Sep 08, 2023

Colourful content, images, videos. Yakshagaana, the himmela takes me back to my childhood. Well compiled article. Thank you Kavitha aunt, Mahesh.

Like

© 2023 by SWAGRAAM FOUNDATION

  • Youtube
  • LinkedIn
bottom of page